ರಾಜಮ್ಮ, ಎಂ ವಿ  (1923-2003) ತ್ರಿಭಾಷಾ ನಟಿ, ಕನ್ನಡ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಮುಖ್ಯ ನಟಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಬೆಂಗಳೂರು ಜಿಲ್ಲೆಯ ಅಗಂಡನಹಳ್ಳಿಯಲ್ಲಿ 1923ರಲ್ಲಿ ಜನಿಸಿದರು. ಬೆಂಗಳೂರಿನ ಆರ್ಯ ಬಾಲಿಕಾಶಾಲೆಯಲ್ಲಿ ಎಂಟನೆಯ ತರಗತಿಯವರೆಗೆ ಕಲಿತರು. ಬಣ್ಣದ ವೃತ್ತಿಯನ್ನು ಮೆಚ್ಚಿ ಈ ರಂಗಕ್ಕೆ ಪ್ರವೇಶಿಸಿದ ಇವರು ಪ್ರಾರಂಭದಲ್ಲಿ ಪೀರ್ ಅವರ ಚಂದ್ರಕಲಾ ನಾಟಕ ಮಂಡಳಿಯ ನಟಿಯಾಗಿದ್ದರು. 

ಕನ್ನಡದ ಮೊದಲ ಸಾಮಾಜಿಕ ಚಿತ್ರ 'ಸಂಸಾರನೌಕೆ ಇವರ ಅಭಿನಯದ ಮೊದಲ ಚಿತ್ರ. ನಿರ್ದೇಶಕ ಎಚ್.ಎಲ್.ಎನ್. ಸಿಂಹ ಅವರು ಇವರನ್ನು ಚಿತ್ರಜಗತ್ತಿಗೆ ಪರಿಚಯಿಸಿದರು. 'ಸಂಸಾರನೌಕ ಚಿತ್ರದ ಸರಳೆಯಾಗಿ ಬಣ್ಣದ ಲೋಕವನ್ನು ಪ್ರವೇಶಿಸಿದ ಇವರು ಹಿಂತಿರುಗಿ ನೋಡಲಿಲ್ಲ. ಸಿಂಹ ಅವರ ಮಾರ್ಗದರ್ಶನದಲ್ಲಿ ಉತ್ತಮ ಕಲಾವಿದೆಯಾಗಿ ಬೆಳೆದರು. 'ರಾಧಾರಮಣ' (1944) ಎಂಬ ಚಿತ್ರದ ಮೂಲಕ ಮೊತ್ತಮೊದಲ ನಿರ್ಮಾಪಕಿಯಾದರು. ಈ ಚಿತ್ರದಲ್ಲಿ 'ರಾಧಾ ಪಾತ್ರವನ್ನು ಇವರು ವಹಿಸಿದ್ದರು. ಈ ಚಿತ್ರಭಾರೀ ಸೆಟ್ಟುಗಳಿಂದ ಅದ್ದೂರಿಚಿತ್ರವಾಗಿ ಜನರನ್ನು ಆಕರ್ಷಿಸಿತು. 

ಪದ್ಮಿನಿ ಪಿಕ್ಚರ್ಸ್ ಸಹಯೋಗದಲ್ಲಿ ರಾಜಮ್ಮನವರ ಎಂ.ಜಿ.ಆರ್. ಪ್ರೊಡಕ್ಷನ್ಸ್ ನಿರ್ಮಿಸಿದ ಮಕ್ಕಳರಾಜ್ಯ (1968) ಜಾನಪದ ಶೈಲಿಯ ಮಕ್ಕಳ ಚಿತ್ರ. ಪದ್ಮಿನಿ ಪಿಕ್ಚರ್ಸ್‍ನ ಮೂಲಕ ಬಿ.ಆರ್. ಪಂತಲು ಅವರ ನಿರ್ದೇಶನದಲ್ಲಿ ಹಾಗೂ ಅವರೊಡನೆ ಮುಖ್ಯ ನಟಿಯಾಗಿ ಇವರು ಹಲವಾರು ಚಿತ್ರಗಳಲ್ಲಿ ನಟಿಸಿದರು. ನೀಲಕಂಠನ್ ಅವರ ನಿರ್ದೇಶನದಲ್ಲಿ 'ಮೊದಲ್ ತೇದಿ, 'ಶಿವಶರಣೆ ನಂಬೆಕ್ಕ ಚಿತ್ರಗಳು ಈ ಸಂಸ್ಥೆಯಿಂದ ಹೊರಬಂದವು. ಈ ಚಿತ್ರಗಳ ಅನಂತರ ಪಂತಲು-ರಾಜಮ್ಮ ಜೋಡಿ ಅತ್ಯಂತ ಜನಪ್ರಿಯವಾಯಿತು. ರತ್ನಗಿರಿ ರಹಸ್ಯ (1957), ಸ್ಕೂಲ್ ಮಾಸ್ಟರ್ (1958), ಕಿತ್ತೂರು ಚೆನ್ನಮ್ಮ (1961), ಗಾಳಿಗೋಪುರ (1962), ಸತೀಶಕ್ತಿ (1963), ಚಿನ್ನದಗೊಂಬೆ (1964), ದುಡ್ಡೆ ದೊಡ್ಡಪ್ಪ (1966), ಎಮ್ಮೆ ತಮ್ಮಣ್ಣ (1966), ಅಮ್ಮ, (1968), ಮಾಲತಿ ಮಾಧವ (1971), ಒಂದು ಹೆಣ್ಣಿನ ಕಥೆ (1972) - ಇವು ಇವರ ಅಭಿನಯದ ಮುಖ್ಯ ಕನ್ನಡ ಚಿತ್ರಗಳು. ಶ್ರೀಕೃಷ್ಣದೇವರಾಯ ಎಂಬ ಚಿತ್ರದಲ್ಲಿಯೂ ಇವರು ಅಭಿನಯಿಸಿದ್ದಾರೆ. ವೇಲೆಕಾರಿ (1949), ಗುಮಾಸ್ತಾವಿನ್ ಪೆಣ್ (1941), ಮಾಯಲೋಕಂ (1945). ರಾಜಾವಿಕ್ರಮ (1950), ಪೊಯಲ್ ಪೆಣ್ (1952). ಮೊದಲ್‍ತೇದಿ (1953). ಶಿವಶರಣೆ ನಂಬೆಕ್ಕ (1955) ಇದ್ದರು ಪೆಳ್ಳಾಳು (1954) _ ಇವು ಅಭಿನಯದ ತಮಿಳು ಹಾಗೂ ತೆಲಗು ಚಿತ್ರಗಳು. ವಿಜಯವಾಣಿ ಇವರು ಅಭಿನಯಸಿದ ಕೊನೆಯ ಚಿತ್ರ. 
	
ಚಿತ್ರರಂಗದ ಹಿರಿಯ ಕಿರಿಯರೆಲ್ಲರಿಂದಲೂ `ಅಮ್ಮ ಎನಿಸಿಕೊಂಡಿರುವ ರಾಜಮ್ಮನವರು ಒಂದು ರೀತಿಯಲ್ಲಿ ಸಿನಿಮಾರಂಗದ ರಾಜಮಾತೆ. ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ ಗುಣ ಇವರದು. ಕೊಡುಗೈದಾನಿಯಾಗಿಯೂ ಹಲವಾರು ಸಂಘಸಂಸ್ಥೆಗಳಿಗೆ ವ್ಯಕ್ತಿಗಳಿಗೆ ಸಹಾಯ ಮಾಡಿದ್ದಾರೆ. ಇವರು ಬೆಂಗಳೂರಿನಲ್ಲಿ ಒಂದು ವಿದ್ಯಾರ್ಥಿನಿಲಯವನ್ನೂ ಕಟ್ಟಿಸಿದ್ದಾರೆ. ಹೊಸೂರು ಬಳಿ ಉಗ್ಗಂಡ ಹಳ್ಳಿಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದರು. ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ರಾಜ್ಯ ಸರಕಾರ ರಾಜಮ್ಮನವರಿಗೆ 1997-98ನೇ ಸಾಲಿನ ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಿತು. ಕನ್ನಡ ಚಿತ್ರರಂಗ ಮೊದಲ ಮಹಿಳಾ ನಿರ್ಮಾಪಕಿ ರಾಜಮ್ಮ 2003ರಲ್ಲಿ ನಿಧನ ಹೊಂದಿದರು.							   
 (ಪರಿಷ್ಕರಣೆ: ಎಂ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ